Milan Mahalé
Wednesday, May 21, 2008
The Royal Sweeper
ಉತ್ಕಲದ ದೊರೆ ಗಜಪತಿಗಳು ಪುರಿಯ ಜಗನ್ನಾಥ ರಥಯಾತ್ರೆಯಲ್ಲಿ ರಥದ ಮುಂದೆ ಬಂಗಾರದ ಕಸಬರಿಗೆ ಹಿಡಿದು ಗುಡಿಸುವ ಸಂಪ್ರದಾಯವಿತ್ತು .
ಒಮ್ಮೆ ಒಬ್ಬ ಗಜಪತಿಗೆ ನೆರೆ ರಾಜ್ಯದ ರಾಜಕುಮಾರಿಯನ್ನು ಮದುವೆಯಾಗುವ ಆಸೆಯಾಗಿ ತನ್ನ ಮಂತ್ರಿಯನ್ನು ಮದುವೆಯ ಪ್ರಸ್ತಾವದೊಂದಿಗೆ ಕಳಿಸಿದನಂತೆ. ಆ ರಾಜನಾದರೋ " ಕಸ ಗುಡಿಸುವವನಿಗೆ ನನ್ನ ಮಗಳನ್ನು ಕೊಡಲಾರೆ " ಎಂದು ಉತ್ತರಿಸಿದ.
ಸರಿ , ಗಜಪತಿ ತನ್ನ ಅಪಾರವಾದ ಸೈನ್ಯದೊಂದಿಗೆ ಆತನ ಮೇಲೆ ದಾಳಿ ಮಾಡಿ, ಸೋಲಿಸಿ , ಅವರೆಲ್ಲರನ್ನೂ ಬಂಧಿಸಿ ಕಾರಾಗೃಹದಲ್ಲಿರಿಸಿದ. ತನ್ನ ಮಂತ್ರಿಯ ಕೈಗೆ ರಾಜಕುಮಾರಿಯನ್ನು ಒಪ್ಪಿಸಿ " ಇವಳನ್ನು ಯಾರಾದರೂ ಕಸ ಗುಡಿಸುವವನಿಗೆ ಕೊಟ್ಟು ಮದುವೆಮಾಡಿ. ಇದೆ ಅವಳಿಗೆ ಶಿಕ್ಷೆ " ಎಂದುಬಿಟ್ಟ.
ಮಂತ್ರಿ ಸುಮ್ಮನೆ ಆ ರಾಜಕುಮಾರಿಯನ್ನು ಕರೆದುಕೊಂಡು ಹೋದ . ಮುಂದೆಂದೂ ರಾಜ ಅವಳ ಸುದ್ದಿ ಎತ್ತಲಿಲ್ಲವಾದರೂ , ಆತ ಉದಾಸನಾಗಿದ್ದನ್ನು ಮಂತ್ರಿ ಗಮನಿಸಿದ್ದ .
ಮುಂದಿನ ವರ್ಷ ಪುರಿ ಜಗನ್ನಾಥನ ರತ್ಹೋತ್ಸವದ ಸಮಯ ಗಜಪತಿ ಸಂಪ್ರದಾಯದಂತೆ ಬಂಗಾರದ ಕಸಬರಿಗೆ ಹಿಡಿದು ಗುಡಿಸುತ್ತಿರುವಾಗ ಮಂತ್ರಿ ಆ ರಾಜಕುಮಾರಿಯೊಡನೆ ಪ್ರತ್ಯಕ್ಷನಾಗಿ " ಮಹಾಪ್ರಭೂ , ತಮ್ಮ ಆಜ್ಞೆಯಂತೆ ಇವಳಿಗಾಗಿ ವರನನ್ನು ಎಷ್ಟು ಹುಡುಕಿದರೂ ತಮಗಿಂತ ಉತ್ತಮನಾದ ಕಸಗುಡಿಸುವವನು ಎಲ್ಲಿಯೂ ಸಿಗಲಿಲ್ಲ. ದಯವಿಟ್ಟು ತಾವೇ ಇವಳನ್ನು ಸ್ವೀಕರಿಸಿ " ಎಂದು ಅವಳನ್ನು ರಾಜನಿಗೆ ಒಪ್ಪಿಸಿ ಮಾಡುವೆ ಮಾಡಿಸಿದನಂತೆ .
ಹೀಗೆ ಮಂತ್ರಿಯ ಚಾತುರ್ಯದಿಂದ ಎಲ್ಲರೂ ಸುಖವಾಗಿದ್ದರು .
Labels: Gajapati Sweeper